ಪೋಸ್ಟ್‌ಗಳು

ನಮ್ಮೂರ ಜಾತ್ರೆ

ನಮ್ಮೂರ ಜಾತ್ರೆ ಬಲು ಜೋರು ಎಳೆಯುವ ಬನ್ನಿ ದೇವರ ತೇರು ಇಲ್ಲಿ ಅಂಗಡಿಗಳದೇ ಕಾರುಬಾರು ಅದರಲಿ ತಿನಿಸುಗಳು ಹಲವಾರು ಬಂದಿದೆ ಜಾತ್ರೆಗೆ ತಿರುಗುವ ತೊಟ್ಟಿಲು ಹತ್ತಿದರೆ ಭಾಸ ಮುಟ್ಟಿದಂತೆ ಮುಗಿಲು ಪಕ್ಕದಲ್ಲೇ ಇಹುದು ಓಡುವ ರೈಲು ತಿನ್ನುತಲಿ ಏರುವ ಮಸಾಲೆ ಭೇಲು ಬಣ್ಣ ಬಣ್ಣದ ಬಳೆಯ ಅಂಗಡಿಯು ಅಲ್ಲಿಯೆ ಇಹುದು ಕಿವಿಯೋಲೆಯು ಬಿಂದಿ, ಉಗುರಿನ ಬಣ್ಣ, ಕಾಡಿಗೆಯು ಇಹುದಿಲ್ಲಿ ನೋಡು ಬಗೆ ಬಗೆಯು ಚಾಕಲೇಟ್, ಬಿಸ್ಕತಗಳಿಗಿಲ್ಲ ಬರವು ಇರಲಿ ಐಸ್ ಕ್ರೀಮ್, ತಂಪಾದ ಪೇಯವು ಸವಿಯಲು ಬೇಕು ಮೈಸೂರು ಪಾಕವು ಬಂದೇ ಬಿಟ್ಟಿತು ಊಟದ ಸಮಯವು ಆಡಲು ಬೇಕು ಬಗೆ ಬಗೆಯ ಆಟಿಕೆ ದೊಡ್ಡ ವಿಮಾನನು ಕೊಳ್ಳುವ ಬಯಕೆ ಕಾಸಿಲ್ಲದಿದ್ದರೆ ಏನಿಲ್ಲವೂ ಜೋಕೆ ನಮ್ಮೂರಿನ ಜಾತ್ರೆಗೆ ಇಲ್ಲವು ಹೋಲಿಕೆ

ಬೇಸಿಗೆ ರಜೆ

ಬೇಸಿಗೆ ರಜೆ ಬಂತೆಂದರೆ ಸಾಕು ಅಜ್ಜನ ಮನೆಗೆ ಹೋಗಲೇ ಬೇಕು ಅಜ್ಜಿಯ ಮಡಿಲ ಸೇರಲೇ ಬೇಕು ಕುಣಿದು ಕೇಕಯ ಹಾಕಲೇ ಬೇಕು ತಂಪನೆ ನೀರಿನ ಝರಿಯಲಿ ಆಟ ಬಗೆ ಬಗೆ ಭಕ್ಷ್ಯದ ಸವಿ ಸವಿ ಊಟ ಹಚ್ಚ ಹಸುರಿನ ಸಂದರ ತೋಟ ಹಳ್ಳಿಯ ಸೌಂದರ್ಯದ ನೋಟ ಅಜ್ಜನ ಜೊತೆಯಲಿ ಸುತ್ತುವ ಕಾಡು ಬಲು ಇಂಪು ಚಿಲಿಪಿಲಿ ಹಕ್ಕಿಗಳ ಹಾಡು ಸುತ್ತಲೂ ಕಾಡು ಪ್ರಾಣಿಗಳನು ನೋಡು ಬೆಟ್ಟ ಗುಡ್ಡಗಳಲಿ ಛಂಗನೆ ನೆಗೆದು ಓಡು ಅಜ್ಜನ ಮನೆಯೆಂದರೆ ಸ್ವರ್ಗವು ತುಂಬಿಹುದು ಇಲ್ಲಿ ಸಂತಸವು ಮೋಜಿನ ಆಟಗಳಿಗಿದು ತಾಣವು ಇಲ್ಲಿಹುದು ಅಜ್ಜ ಅಜ್ಜಿಯರ ಒಲವು ಮರವನು ಹತ್ತಲು ಬಲು ಮಜವು ರಜೆಯ ತುಂಬಾ ಬರೀ ನಲಿವು ಬೇಸಿಗೆ ರಜೆ ಮುಗಿಯಲು ಬೇಸರವು ಶಾಲೆಯೆಂದರೆ ಯಾಕೋ ಸಜವು

ಆಹಾರ

ಮಗುವೆ ಕೇಳು ಪೌಷ್ಟಿಕ ಆಹಾರದ ಹಿರಿಮೆಯನು ಅರಿತು ಸೇರಿಸಿದರೆ ರೋಗಗಳು ದೂರವು ಹೊಟ್ಟೆಗೆ ಆಹಾರವಿಲ್ಲದೆ ಹಸಿದಿರುವರು ಹಲವರು ಶೋಕಿಗಾಗಿ ತಟ್ಟೆಯಲಿ ಹಾಕಿ ಅನ್ನವ ಚೆಲ್ಲುವರು ಹಿತ-ಮಿತವಾಗಿ ಸೇವಿಸು ಆಹಾರ ಎಂದೆಂದಿಗೂ ಅನಗತ್ಯವಾಗಿ ಹಾಕಿಸಿ ಚೆಲ್ಲದಿರು ಎಂದಿಗೂ ನಾರು-ನೀರು ಬೇಕು ನಿತ್ಯದ ಆಹಾರದಲಿ ಸೊಪ್ಪು-ತರಕಾರಿಗೆ ಪ್ರಾಮುಖ್ಯತೆ ಇರಲಿ ಕರಿದ-ಹುರಿದ ಆಹಾರ ಸೇವನೆಗೆ ಮಿತಿ ಇರಲಿ ಹಣ್ಣು, ಸಿರಿಧಾನ್ಯಗಳ ಬಳಕೆ ನಿತ್ಯವೂ ಇರಲಿ

ಮರಿ ಗುಬ್ಬಿ

ಪುಟ್ಟ ಗುಬ್ಬಿ ಮರಿಯೊಂದು ಹಾರಿ ಬಂದು ಕುಳಿತಿತು ಅಂಗಳದಲಿ ಬಿದ್ದ ಕಾಳನು ಹೆಕ್ಕಿ ಹೆಕ್ಕಿ ತಿಂದಿತು ಚಿಂವ್ ಚಿಂವ್ ಎನ್ನುತಾ ಹಾಡನೊಂದು ಹಾಡಿತು ಪುರ್ ಎಂದು ರೆಕ್ಕೆ ಬಡಿದು ಎತ್ತರದ ಬಾನಿಗೆ ಹಾರಿತು ಕಾಳು ತಿಂದ ಖುಷಿಯಲಿ ತನ್ನ ಗೂಡು ಹುಡುಕಿತು ಸೂರ್ಯ ಮುಳುಗಿ ಆಗ ಕತ್ತಲೆಯು ಕವಿಯಿತು ತನ್ನ ಗೂಡು ಕಾಣದೆ ಗುಬ್ಬಿ ಮರಿಯು ದುಃಖಗೊಂಡಿತು ಹಾರಿ ಆಯಾಸಗೊಂಡು ಮರದ ಮೇಲೆ ಕುಳಿತಿತು ಅಮ್ಮ ಗುಬ್ಬಿ ಮರಿಯ ಹುಡುಕುತ ಅಲ್ಲಿ ಬಂದಿತು ತನ್ನ ಮರಿಯ ಕಂಡು ಹಿಗ್ಗಿ ಗೂಡಿಗೆ ಕರೆದೊಯ್ದಿತು

ಸಹ ಜೀವನ

ಒಂಟಿಯಾಗಿ ಬದುಕಲು ಸಾಧ್ಯವಿಲ್ಲ ಮಗುವೇ ನಮಗೆ ಬದುಕಲು ಬೇಕು ಸುಂದರ ಜೀವನವೇ ಅಜ್ಜ-ಅಜ್ಜಿ, ಅತ್ತೆ-ಮಾವ, ಅಕ್ಕ-ಅಣ್ಣನೊಂದಿಗೆ ಜೀವನ ನೆರೆ-ಹೊರೆಯವರೊಂದಿಗೆ ಬೆರೆತು ಬಾಳಲು ನಂದನ ಶಾಲೆಯಲಿ ಬೇಕು ಗುರುವು ಒಳ್ಳೆಯ ಸಹಪಾಠಿಗಳು ಎಲ್ಲರೊಂದಿಗೆ ನಗುತಲಿದ್ದರೆ ಸುಂದರವು ಈ ಬಾಳು ಒಂದು ಅಗುಳ ಕಂಡರೆ ಹಂಚಿ ತಿನ್ನುವುದು ಕಾಗೆ ಪ್ರಾಣಿ-ಪಕ್ಷಿಗಳು ಸಹ ಬದುಕಲಿ ಬೇಕು ನಮಗೆ ಮರದ ಜೊತೆಯಲಿ ಬಳ್ಳಿಯ ಸಹ ಜೀವನ ಸಸ್ಯ ಸಂಕುಲ ಇರಲು ಬಾಳು ವಿನೂತನ

ನವಿಲು

ಬಾ ಬಾರೆ ನವಿಲೆ ಬಾ ಬಾರೆ ನವಿಲೆ ಓ ನವಿಲೆ ಆಡುವ ಬಾ ಬಾರೆ ನವಿಲೆ ||ಪ|| ಗೆಜ್ಜೆಯ ಕಟ್ಟಿ ಕುಣಿಯುವ ಬಾರೆ ಹೆಜ್ಜೆಯ ಹಾಕಿ ನಲಿಯುವ ಬಾರೆ ಕೋಗಿಲೆಯಂತೆ ಹಾಡುವ ಬಾರೆ ಕೊಳದ ನೀರಲಿ ಈಜುವ ಬಾರೆ ||೧|| ಗರಿಗಳ ಬಿಚ್ಚಿ ನರ್ತಿಸುವ ಬಾರೆ ಹಣ್ಣನು ಕುಕ್ಕಿ ಮೆಲ್ಲುವ ಬಾರೆ ಹಸಿರ ಸಿರಿಯಲಿ ಓಡುವ ಬಾರೆ ಬಣ್ಣದ ಹೂವ ಕೊಯ್ಯುವ ಬಾರೆ ||೨|| ಸಾವಿರ ಕಣ್ಣಿನ ನವಿಲೆ ಬಾರೆ ಕೃಷ್ಣನ ಮೆಚ್ಚಿನ ನವಿಲೆ ಬಾರೆ ರಾಷ್ಟ್ರ ಪಕ್ಷಿ ನವಿಲೆ ಬಾರೆ ಅಂದ ಚೆಂದದ ನವಿಲೆ ಬಾರೆ ||೩|| ಮಳೆಯಲಿ ನೆನೆಯುವ ಬಾರೆ ಹೊಂಬಿಸಲಲಿ ಕೂರುವ ಬಾರೆ ನಿನ್ನ ಸೊಬಗ ತೋರಲು ಬಾರೆ ನಮ್ಮೊಡನಾಡಲು ಬೇಗನೆ ಬಾರೆ ||೪|| ನವಪರ್ವ ಫೌಂಡೇಶನ್ : ಉತ್ತಮ ಸ್ಥಾನ  10/07/2020

ಆನೆ ಮತ್ತು ಹಕ್ಕಿ

  ಆನೆಯೊಂದು ಬಂದಿತು ಕೆಂಪು ಹೂವ ತಂದಿತು ಜೊತೆಗೆ ಹಕ್ಕಿ ಬಂದಿತು  ಚಿಂವ್ ಚಿಂವ್ ಎಂದಿತು ಪುಟ್ಟ ಮಗುವು ನೋಡಿತು  ಕುಣಿದು ಕೇಕೇ ಹಾಕಿತು  ಮುದದಿ ನಕ್ಕು ನಲಿಯಿತು ಹೂವು ಬೇಕು ಎಂದಿತು ಆನೆ ಬಳಿಗೆ ಹೋಯಿತು ಕಬ್ಬನು ಮಗುವು ನೀಡಿತು ಹೂವನು ಪಡೆಯಿತು  ಸಂಸತದಿ ನಲಿಯಿತು ಕಾಳುಗಳನು ತಂದಿತು ಪುಟ್ಟ ಹಕ್ಕಿಗೆ ನೀಡಿತು ಹಕ್ಕಿ ಹೆಕ್ಕಿ ಹೆಕ್ಕಿ ತಿಂದಿತು ಮಗುವು ಪುಳಕಗೊಂಡಿತು ಖಿದ್ಮ ಫೌಂಡೇಶನ್ : ಅತ್ಯುತ್ತಮ ಸ್ಥಾನ  28/07/2020